ಧ್ವನಿ ಟ್ರಸ್ಟ್ ಸ್ಥಾಪನೆಯ ಹಿನ್ನೆಲೆ
1990ರ ಕಾಲ. ಶಾಲೆ-ಕಾಲೇಜುಗಳು, ಸಂಶೋಧನ ಕೇಂದ್ರಗಳಲ್ಲಿ ಶಿಕ್ಷಕರಾಗಿ, ಉಪನ್ಯಾಸಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ ಅನುಭವ ಹೊಂದಿದ್ದ ಸಮಾನ ಮನಸ್ಕ ಗೆಳಯರ ಗುಂಪು ಒಂದಿತ್ತು. ಗ್ರಾಮೀಣ ಮತ್ತುನಗರ ಪ್ರದೇಶಗಳಲ್ಲಿ ಬದುಕಿ, ಕಲಿತು, ಅಧ್ಯಯನ ಮಾಡಿ ಬೆಳೆದ ಜೀವನದ ಬೇರೆ ಬೇರೆ ಹಂತದ ಅನುಭವದ ಹಿನ್ನೆಲೆ ಆ ಗುಂಪಿನ ಸದಸ್ಯರಿಗೆ ಇದ್ದಿತು. ಇಂಥ ಗೆಳೆಯರ ಗುಂಪು, ಆಗಿನ ಬೆಂಗಳೂರಿನ ಪ್ರಶಾಂತ ಹೊರವಲಯದಲ್ಲಿ ಕುಳಿತು, ಹೆಚ್ಚೂಕಡಿಮೆ ದಿನವೂ ಸಂಜೆ ಶಿಕ್ಷಣ ಮತ್ತು ಜೀವನ ಮೌಲ್ಯಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕುರಿತು ಗಂಭೀರವಾಗಿ ಸಂವಾದ ನಡೆಸುತ್ತಿತ್ತು. ಹಲವು ತಿಂಗಳುಗಳ ಕಾಲ ನಡೆದ ಆ ಅನ್ವೇಷಣಾತ್ಮಕ ಸಂವಾದದಲ್ಲಿ ಅನೇಕ ಒಳನೋಟಗಳು, ಹೊಸ ಹೊಳಹುಗಳು ಹುಟ್ಟಿಕೊಳ್ಳುತ್ತಿದ್ದವು. ಆ ಒಳನೋಟಗಳು ಮತ್ತು ಹೊಸ ಹೊಳಹುಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಏನನ್ನಾದರೂ ಅರ್ಥಪೂರ್ಣವಾದುದನ್ನು ಸಾಧಿಸಬಲ್ಲ ಚೈತನ ಇದ್ದಿತು.
ಆ ಚೈತನ್ಯವು, 2001ರ ಡಿಸೆಂಬರ್ 13ರಂದು ಕಾನೂನುಬದ್ಧವಾಗಿ (ಭಾರತೀಯ ಸೊಸೈಟಿ ಕಾಯ್ದೆ 1860) ಧ್ವನಿ ಟ್ರಸ್ಟ್ ಹೆಸರಿನಲ್ಲಿ ಸ್ಥಾಪಿತವಾಯಿತು(ನೋಂದಣಿ ಸಂಖ್ಯೆ: 210/2001-02).
ಧ್ವನಿ ಟ್ರಸ್ಟ್ ಸ್ಥಾಪನೆಯಾದ ದಿನದಿಂದಲೂ ಟ್ರಸ್ಟಿನ ಶಿಕ್ಷಣ ವಿಭಾಗವಾಗಿ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರವು ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ.
ಧ್ವನಿ ಟ್ರಸ್ಟ ಒಪ್ಪಿಕೊಂಡಿರುವ ಕೆಲವು ಚಿಂತನೆಗಳು, ಹೊಳಹುಗಳು ಮತ್ತು ಮೌಲ್ಯಗಳು
ಮನುಷ್ಯ ಜೀವನದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಗಹನವಾದುದು. ಆದರೆ, ನಿಜವಾದ ಶಿಕ್ಷಣವು ಓದು-ಬರಹ-ಕೂಡುವ-ಕಳೆಯುವ-ಗುಣಿಸುವ-ಭಾಗಿಸುವಂಥ ಕೌಶಲಗಳ ಗಳಿಕೆಗೆ ಸೀಮಿತವಾಗಿರುವುದಿಲ್ಲ. ನಿಜವಾದ ಶಿಕ್ಷಣವು, ಈ ಪ್ರಾಥಮಿಕ ಕೌಶಲಗಳನ್ನು ಕಲಿಯಬೇಕಾದ ಅಗತ್ಯವನ್ನು ಒಪ್ಪಿಕೊಂಡೂ, ಅವುಗಳ ಸೀಮಾರೇಖೆಯನ್ನು ದಾಟುವ ಮೂಲಕವೇ ಜೀವನದ ಸತ್ಯಗಳನ್ನು- ಸೌಂದರ್ಯಗಳನ್ನು ಕಂಡುಕೊಳ್ಳುವ ಚೈತನ್ಯವನ್ನು ಮನುಷ್ಯನಿಗೆ ತಂದುಕೊಡುವ ಅತ್ಯಂತ ಪ್ರಬಲ ಶಕ್ತಿಯಾಗಿದೆ.
ಆದರೆ, ಪ್ರಸಕ್ತ ಶಿಕ್ಷಣವು ಈ ಕೌಶಲಗಳ ಗಳಿಕೆಗೆ, ಅದೂ ತೆಳುವಾದ ರೀತಿಯಲ್ಲಿನ ಗಳಿಕೆಗೆ ತನ್ನೆಲ್ಲ ಶಕ್ತಿಯನ್ನು ವ್ಯಯ ಮಾಡುತ್ತಿದೆ. ಆ ಕೌಶಲಗಳನ್ನು ಏಕೆ ಗಳಿಸಿಕೊಳ್ಳಬೇಕು ಎಂಬ ಪ್ರಶ್ನೆಗೆ ಅದು ಕೊಡುವ ಉತ್ತರವೂ ಅತ್ಯಂತ ತೆಳುವಾಗಿದೆ. ಇಂಥ ಪರಿಸ್ಥಿತಿಯಲ್ಲಿ, ಪ್ರಜ್ಞಾವಂತನಾದ ವ್ಯಕ್ತಿ, ವ್ಯಕ್ತಿಗಳ ಗುಂಪು ಅಥವಾ ಸಂಸ್ಥೆಯು ಬಯಸುವಂತೆ, ಧ್ವನಿ ಟ್ರಸ್ಟ್ ಕೂಡ ಕೌಶಲಗಳ ಗಳಿಕೆಯನ್ನು ಗೌರವಿಸುತ್ತಲೇ, ಅವುಗಳ ಸಹಾಯದಿಂದ ಜೀವನ ಸತ್ಯ-ಸೌಂದರ್ಯಗಳನ್ನು ಕಂಡುಕೊಳ್ಳುವ, ಬದುಕುವ ಉದಾರ ಹೃದಯದ ಧೀರ ವಿಶ್ವಮಾನವ ನಿರ್ಮಾಣದ ಪ್ರಯತ್ನದಲ್ಲಿ ವಿನಯಪೂರ್ವಕವಾಗಿ ತೊಡಗಿಕೊಂಡಿದೆ.
ಮಕ್ಕಳ ಕಲಿಕೆಯು ಕಲಿಕೆಯು ಅತ್ಯಂತ ಸಹಜವೂ ಸುಂದರವೂ ಸಶಕ್ತವೂ ಅರ್ಥಪೂರ್ಣವೂ ಆಗುವಂತೆ ಮಾಡಲು ಮನೆಯ ಮಾತು-ತಾಯಿನುಡಿ, ಅದರ ಹತ್ತಿರದ ಪರಿಸರದ ಭಾಷೆಗಳು ಆದ್ಯತೆ ನೀಡುವುದು. ಸುತ್ತಮುತ್ತಲಿನ ಸಾಮಾಜಿಕ – ಪ್ರಾಕೃತಿಕ- ಸಾಂಸ್ಕೃತಿಕ ಅಂಶಗಳಿಗೆ ಆದ್ಯತೆ ನೀಡುವುದು.
ಜೀವನದ ಬಹು ಬೆಲೆಯುಳ್ಳ ಮೌಲ್ಯಗಳಾಗಿರುವ ಸಹಕಾರ, ಸಹಬಾಳ್ವೆ, ಸಂತಸ, ಆನಂದಗಳನ್ನು ಶಿಕ್ಷಣದ ಮೂಲಕ ಸಾಧ್ಯವಾಗಿಸಲು ಪ್ರಯತ್ನಿಸುವುದು.
ಮಗುವಿನ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಇಡೀ ವಿಶ್ವ ಚೇತನ್ಯ ಮತ್ತು ವಿಶ್ವ ಸಂಸ್ಕೃತಿಯು ಸಹಜವಾಗಿ ಒಳಗೊಳ್ಳುತ್ತಾ ವಿಶ್ವಮಾನವನಾಗುವ ದಿವ್ಯ ವಿದ್ಯಮಾನಕ್ಕೆ ಮುಕ್ತವಾಗುವ ವಾತಾವರಣ ಸೃಷ್ಟಿಸುವುದು.
ಮೇಲಿನ ಹೊಳಹು ಚಿಂತನೆಗಳನ್ನು ಸಾಕಾರಗೊಳಿಸಲು ಕಂಡುಕೊಂಡಿರುವ ದಾರಿ
ಸಮಗ್ರ ಶಿಕ್ಷಣಕ್ಕೆ ಅತ್ಯಂತ ಗಟ್ಟಿಯಾದ ಬುನಾದಿಯ ಅಗತ್ಯವಿದೆ. ಆ ಬುನಾದಿಯೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ. ಧ್ವನಿ ಟ್ರಸ್ಟ್ ತನ್ನ ಅಂಗವಾಗಿರುವ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದ ಮೂಲಕ ಈ ಕೆಲಸಗಳಲ್ಲಿ ತೊಡಗಿಕೊಂಡಿದೆ.
* ಶೈಕ್ಷಣಿಕ ಯೋಜನೆಗಳನ್ನು ರೂಪಿಸುವುದು
* ಮಕ್ಕಳ ಕಲಿಕೆ ಹಾಗೂ ಶಿಕ್ಷಕರ ಬೋಧನೆಗೆ ಪೂರಕವಾಗುವ ಸಂಪನ್ಮೂಲಗಳನ್ನು ರೂಪಿಸುವುದುಂಟು
* ವಿಶಿಷ್ಠ ಹಾಗೂ ವಿಭಿನ್ನ ರೀತಿಯ ಕಾರ್ಯಾಗಾರಗಳ ಮೂಲಕ ಶಿಕ್ಷಕರ ಚಿಂತನಾ ಕ್ರಮ, ಬೋಧನಾ ವಿಧಾನಗಳಲ್ಲಿ ಹೊಸತನ
ಮೂಡಿಸಲು ಯತ್ನಿಸುವುದು
* ಮಕ್ಕಳು ಮತ್ತು ಶಿಕ್ಷಕರಲ್ಲಿ ಸಾಹಿತ್ಯಾಭಿರುಚಿ ಮೂಡಿಸುವುದು
* ಜೀವನ ಮೌಲ್ಯಗಳ ಬಗ್ಗೆ ಕಾಳಜಿಯುಳ್ಳವರಿಗಾಗಿ ಸಂವಾದ ಏರ್ಪಡಿಸುವುದು
* ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ನಡೆದಿರುವ ಸಂಶೋಧನೆಗಳ ಅಧ್ಯಯನ ಮತ್ತು ಅನುವಾದ ಹಾಗೂ ವಿವಿಧ ಮಾಧ್ಯಮಗಳಲ್ಲಿ ಪ್ರಕಟಣೆ ಮಾಡುವುದು
ಕಾರ್ಯಕ್ರಮಗಳು
-
ಪಠ್ಯಪುಸ್ತಗಳನ್ನು ಅವುಗಳ ಎಲ್ಲ ಮಿತಿಗಳೊಂದಿಗೆ ಒಪ್ಪಿಕೊಂಡೂ, ಅವುಗಳಿಗೆ ಸೀಮಿತಗೊಳ್ಳದೇ ಪಠ್ಯಕ್ರಮದ ಆಶಯ ಆಧಾರಿತ ಪೂರಕ ಸಂಪನ್ಮೂಲಗಳ ಸೃಷ್ಟಿ, ಪ್ರಕಟಣೆ ಮತ್ತು ವಿತರಣೆ ಮಾಡುವುದು
-
ಸೇವಾನಿರತ ಹಾಗೂ ಸೇವಾಪೂರ್ವ ಶಿಕ್ಷಕರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು
-
ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ನವೀನ ಪ್ರಯೋಗಗಳು, ಸಂಶೋಧನೆಗಳನ್ನು ಮೂಲ ಲೇಖನಗಳ ಬರವಣಿಗೆ ಮತ್ತು ಅನುವಾದಗಳ ಮೂಲಕ ಪರಿಚಯಿಸುವುದು
-
ಸಮಾನ ಮನಸ್ಕ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಹಕಾರ್ಯಗಳಲ್ಲಿ ತೊಡಗಿಕೊಳ್ಳುವುದು
ಮೇಲಿನ ಮೂರು ಕಾರ್ಯಕ್ರಮಗಳನ್ನು ಧ್ವನಿ ಸಂಪನ್ಮೂಲ ಕೇಂದ್ರವು ಆರಂಭ, ಪೂರಣ, ಚಿತ್ರಣ ಇವೇ ಮುಂತಾದ ಯೋಜನೆಗಳ ಮೂಲಕ ಅನುಷ್ಠಾನಕ್ಕೆ ತರುತ್ತಿದೆ. ಈ ಯೋಜನೆಗಳ ಮೂಲಕ ಸೃಷ್ಟಿಯಾಗುವ ಪಠ್ಯಕ್ರಮ ಪೂರಕ ಸಂಪನ್ಮೂಲಗಳನ್ನು ಆಯಾ ಯೋಜನೆಗಳಲ್ಲಿ ಭಾಗವಹಿಸುತ್ತಿರುವ ಶಿಕ್ಷಕರು, ಮಕ್ಕಳು, ಪಾಲಕರು ಮುಂತಾದವರೊಂದಿಗೆ ಉಚಿತವಾಗಿ ಹಂಚಿಕೊಳ್ಳಲಾಗುತ್ತಿದೆ.
ಬಹುಪಾಲು ಸಂಪನ್ಮೂಲಗಳು ಮುದ್ರಿತ, ಮೂರು ಆಯಾಮ ಜೊತೆಗೆ ವಿವಿಧ ಬಗೆಯ ಡಿಜಿಟಲ್ ರೂಪಗಳಲ್ಲಿ ಸಿದ್ಧಗೊಳ್ಳುತ್ತವೆ. ಮುದ್ರಿತ ಹಾಗೂ ಕೇಳುವ-ನೋಡುವ ಸಂಪನ್ಮೂಲಗಳನ್ನು ಆಸಕ್ತರು ಈ ಬೆಬ್ ಸೈಟ್ ಮೂಲಕವೂ ಪಡೆದುಕೊಳ್ಳಬಹುದು.