Welcome to Dhwani Trust

ಹುಡುಕಿ

 

ಪೂರಣ

ನಾವು ಶಾಲೆಗೆ ಹೋಗುತ್ತಿರುವಾಗ ಪಠ್ಯ ಪುಸ್ತಕಗಳಲ್ಲಿ ಅರ್ಥವಾಗಲಾರದಂತಹ ಸಾಕಷ್ಟು ವಿಷಯಗಳಿರುತ್ತಿದ್ದವು. ಇದು ನಿಮ್ಮ ಅನುಭವವೂ ಆಗಿರಬಹುದು. ಅರ್ಥವಾಗದ ಕಾರಣ ಪಾಠದಲ್ಲಿ ಆಸಕ್ತಿ ಕಡಿಮೆಯಾಗುತ್ತಿತ್ತು. ಸಮಾಜ ವಿಜ್ಞಾನದಲ್ಲಿ ಶಾಸನಗಳು ಹಾಗೂ ನಾಣ್ಯಗಳ ಬಗ್ಗೆ ಪ್ರಸ್ತಾಪವಿರುತ್ತಿತ್ತು. ಆಗ ಮುಟ್ಟುವುದಿರಲಿ, ನಾವು ಅವುಗಳನ್ನು ನೋಡಲೂ ಇಲ್ಲ. ಅನೇಕ ಬಾರಿ ಪಾಠಗಳಾಗಲಿ, ಶಿಕ್ಷಕರಾಗಲಿ ಮಾಹಿತಿಗಳನ್ನೂ ಹಾಗೂ ತಾರ್ಕಿಕ ವಿವರಣೆಗಳನ್ನು ನೀಡಿ, ನಮ್ಮಲ್ಲಿರುವ ಕುತೂಹಲಗಳನ್ನು ನಾಶಪಡಿಸುತ್ತಿದ್ದರು. ಹಾಗೆಯೇ ವ್ಯಾಕರಣವೆಂದರೆ ಬರೀ ನಿಯಮಗಳೆಂಬ ಭಾವನೆಯಿತ್ತು, ಈ ನಿಯಮಗಳನ್ನು ಏಕೆ ಮಾಡಿದರು ಎಂಬುದೇ ಅರ್ಥವಾಗುತ್ತಿರಲಿಲ್ಲ. ಭೂಗೋಲದಲ್ಲಿ ಯಾವ ಸ್ಥಳ ಎಲ್ಲಿದೆ ಎಂಬುದೇ ತಿಳಿಯುತ್ತಿರಲಿಲ್ಲ. ಕೆಲವು ಬಾರಿ ನಕಾಶಗಳೇ ಇರುತ್ತಿರಲಿಲ್ಲ, ಇದ್ದರೂ ಪಾಠದಲ್ಲಿರುವ ಸ್ಥಳಗಳು ಆ ನಕಾಶದಲ್ಲಿರಲಿಲ್ಲ. ಮಾಹಿತಿಯ ಕೊರತೆಯಿಂದ ಅನೇಕ ಬಾರಿ ನಾವೇ ಏನೇನೋ ಉಹಿಸುತ್ತಿದ್ದೆವು. ಸಾಕಷ್ಟು ಬಾರಿ ನಮ್ಮ ಊಹೆಗೂ ನಿಲುಕದೇ ಈ ವಿಷಯಗಳು ನೀರಸವಾಗುತ್ತಿದ್ದವು. ಶಿಕ್ಷಕರ ಬಳಿಯೂ ಎಲ್ಲ ರೀತಿಯ ಸಂಪನ್ಮೂಲಗಳರಿದಿದ್ದರಿಂದ ಅಶಕ್ತರಾಗಿದ್ದರು. ಇಂಥ ಸನ್ನಿವೇಶದಲ್ಲಿ ಚಲನೆ ಮೂಡಿಸುವ ಕೆಲವು ವಿಚಾರಗಳಿಂದ ಪೂರಣ ಯೋಜನೆ ರೂಪುಗೊಂಡಿತು.

ಪೂರಣ ಯೋಜನೆಯು ಬೋಧನಾ/ಕಲಿಕಾ ಪ್ರಕ್ರಿಯೆಯನ್ನು ಶಿಕ್ಷಕರಿಗೂ ಹಾಗೂ ಮಕ್ಕಳಿಗೂ ಆನಂದದಾಯಕವಾಗುವಂತೆ ಮಾಡುವ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿದೆ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಪ್ರತಿ ಪಾಠಕ್ಕೂ ಪೂರಕವಾಗುವಂತೆ ಸಂಪನ್ಮೂಲಗಳನ್ನು ಸಿದ್ಧಗೊಳಿಸಿ, ಶಿಕ್ಷಕರು ತಾವೇ ಬಳಸಿ ಮಕ್ಕಳು ಕಲಿಕೆಯಲ್ಲಿ ಸಾಕಷ್ಟು ಸ್ಫೂರ್ತಿಯಿಂದ ಭಾಗವಹಿಸುವಂತೆ ಮಾಡಲು ಪ್ರಯತ್ನಿಸುತ್ತಿದೆ. ಬಣ್ಣ ಬಣ್ಣದ ಸಂಚಿಕೆಗಳು, 3-D ಮಾದರಿಗಳು ಹಾಗೂ ಪ್ರೇರಣಾ ಕಾಗದಗಳು (worksheets) ಮಕ್ಕಳಿಗೆ ಶೈಕ್ಷಣಿಕ ಅನುಭವವನ್ನು ಕೊಡುವದರಲ್ಲಿ ಸಹಾಯಕವಾಗುತ್ತಿವೆ.

ಪೂರಣ ಯೋಜನೆಯು 2004-05ರಲ್ಲಿ ಪ್ರಾರಂಭವಾಯಿತು. ಕಳೆದ ಐದು ವರ್ಷದಿಂದ ಶಿಕ್ಷಕರ ಮತ್ತು ಮಕ್ಕಳಿಂದ ದೊರೆತ ಒಳ್ಳೆಯ ಪ್ರತಿಕ್ರಿಯೆಯು ನಮಗೆ ಆನಂದವನ್ನುಂಟು ಮಾಡಿದೆ. ಇದರಿಂದ ನಮ್ಮ ಶಕ್ತಿಯೂ ಬೆಳೆದಿದೆ. ಪೂರಣ ಯೋಜನೆಯಡಿ ದೊರೆತ ಅನುಭವಗಳು, ವಿಧಾನಗಳು ಹಾಗೂ ಸಂಪನ್ಮೂಲಗಳು ಮತ್ತು ಸಂಪನ್ಮೂಲಗಳು ಕಲಿಕೆಗೆ ಸಹಾಯಕವೂ, ಸ್ಫೂರ್ತಿದಾಯಕವೂ ಹಾಗೂ ಅವಶ್ಯಕವೂ ಆಗಿವೆ ಎಂದು ಅವರ ಹಿಮ್ಮಾಹಿತಿ.

ಈ ಯೋಜನೆಯು ಹಿರಿಯ ಪ್ರಾಥಮಿಕ, ಅಂದರೆ 5,6,7ನೇ ತರಗತಿಗಳಿಗಾಗಿ ರೂಪಿತವಾಗಿದ್ದು, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಪಠ್ಯಕ್ರಮವನ್ನು ಆಧರಿಸಿದೆ. ಸದ್ಯಕ್ಕೆ ಧ್ವನಿ ಸಂಸ್ಥೆಯು ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪೂರಕ ಸಂಪನ್ಮೂಲಗಳನ್ನು ಸೃಷ್ಟಿಸುವ ಕೆಲಸದಲ್ಲಿ ತೊಡಗಿಕೊಂಡಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಯೋಜನೆಯ ವಿನ್ಯಾಸ

ಪೂರಣ ಯೋಜನೆಯಡಿ ತಮ್ಮ ಸ್ವಯಂ ಆಸಕ್ತಿಯಿಂದಾಗಿ ಆಯ್ಕೆಯಾಗಿರುವ ಶಿಕ್ಷಕರಿಗೆ 2 ದಿನ ತರಬೇತಿಯನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೊಡಲಾಗುವುದು. ಕನ್ನಡ, ಸಮಾಜ ವಿಜ್ಞಾನ ವಿಷಯಗಳಲ್ಲಿ ಅನುಭವಾತ್ಮಕ ತರಬೇತಿಗಳನ್ನು ಈ ಕಾರ್ಯಗಾರಗಳಲ್ಲಿ ನೀಡಲಾಗುತ್ತದೆ.

ಪ್ರತಿ ತಿಂಗಳು ಪಠ್ಯಕ್ರಮಕ್ಕನುಸರಿಸಿ ತಯಾರಿಸಿದ ಸಂಪನ್ಮೂಲಗಳನ್ನು ಭಾಗವಹಿಸುವ ಶಾಲೆಗಳಿಗೆ ತಲುಪಿಸಲಾಗುವುದು. ಧ್ವನಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳು ಶಾಲೆಗಳಿಗೆ ಪ್ರತಿ ತಿಂಗಳು ಭೇಟಿ ನೀಡುತ್ತಾರೆ. ಈ ಸಮಯದಲ್ಲಿ, ಆಯಾ ತಿಂಗಳ ಪಾಠಯೋಜನೆಗೆ ಪೂರಕವಾಗಿ ರೂಪಿಸಲಾಗಿರುವ ಬೋಧನಾ ಸಾಮಗ್ರಿಗಳ ವಿತರಣೆ ಹಾಗೂ ಅವುಗಳ ಬಗ್ಗೆ ಶಿಕ್ಷಕರಿಗೆ ಹೆಚ್ಚಿನ ವಿವರ ನೀಡಲಾಗುವುದು. ಅದೇ ವೇಳೆಯಲ್ಲಿ, ಕಳೆದ ತಿಂಗಳಲ್ಲಿ ಧ್ವನಿ ಸಾಮಗ್ರಿ ಬಳಸಿದ ಕ್ರಮ, ಆಗ ತಮಗಾದ ಅನುಭವ ಹಾಗೂ ತಮ್ಮ ಪರಿವೀಕ್ಷಣೆಗಳು ಮತ್ತು ಮಕ್ಕಳ ಪ್ರತಿಕ್ರಿಯೆ ಇತ್ಯಾದಿಗಳ ಬಗ್ಗೆ ಶಿಕ್ಷಕರಿಂದ ಹಿಮ್ಮಾಹಿತಿ ಪಡೆಯಲಾಗುವುದು. ಶಿಕ್ಷಕರು ಆ ಸಮಯದಲ್ಲಿ ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡಲು ಅವಕಾಶವಿರುತ್ತದೆ. ಈ ಭೇಟಿಯ ಸಮಯದಲ್ಲಿ ಕೆಲವು ಶಿಕ್ಷಕರು ನಿರ್ದಿಷ್ಟ ಶೈಕ್ಷಣಿಕ ಬೇಡಿಕೆಗಳನ್ನು ಮುಂದಿಡುವುದೂ ಉಂಟು. ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಂದು ವಾರ್ಷಿಕ ಹಿಮ್ಮಾಹಿತಿ ಸಭೆ ಇರುತ್ತದೆ. ಪೂರಣ ಯೋಜನೆಗೆ ಸಂಬಂಧಿಸಿದಂತೆ, ಆ ವರ್ಷದ ಸಮಗ್ರ ನೋಟವನ್ನು ಪಡೆದುಕೊಳ್ಳುವುದು ಮತ್ತು ಬರುವ ವರ್ಷದಲ್ಲಿನ ಕಾರ್ಯಕ್ರಮದ ಬಗ್ಗೆ ಶಿಕ್ಷರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿರುತ್ತದೆ.

ಸಾಮಗ್ರಿ ಸ್ವರೂಪ

ಪೂರಣ ಯೋಜನೆಯಡಿ ಸಿದ್ಧವಾದ ಸಾಮಗ್ರಿಗಳು ಹಲವು ವಿಶೇಷತೆಗಳನ್ನು ಹೊಂದಿರುತ್ತವೆ:

  • ಪಠ್ಯಪುಸ್ತಕದಲ್ಲಿ ಸೂಚಿಸಿರುವ ಹಾಗೂ ಧ್ವನಿಯು ವಿನ್ಯಾಸಗೊಳಿಸಿರುವ ಚಟುವಟಿಕೆಗಳನ್ನು ನಡೆಸಲು ಸಹಾಯಕವಾಗುವಂತಿರುತ್ತವೆ.
  • ಮಕ್ಕಳು ಪಾಠದಲ್ಲಿರುವ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು, ತಮ್ಮ ಮನಸ್ಸು ಮತ್ತು ಬುದ್ಧಿ ವಿಕಾಸ ಮಾಡಿಕೊಳ್ಳಲು ಅನುವಾಗುವ ರೀತಿಯಲ್ಲಿರುತ್ತವೆ.
  • ಶಿಕ್ಷಕರು ತಮ್ಮ ವಿಷಯ ಜ್ಞಾನದ ಆಳವನ್ನು ಹೆಚ್ಚಿಸಿಕೊಳ್ಳಲು ಸಹಾಯ ಒದಗಿಸುತ್ತವೆ.

ಪ್ರತಿ ತಿಂಗಳ ಪೂರಣ ಸಾಮಗ್ರಿಯು ಹೀಗಿರುತ್ತದೆ:

  1. ಸಂಚಿಕೆ - ಇದರಲ್ಲಿ ಪಾಠದಲ್ಲಿರುವ ಕಲಿಕಾಂಶಗಳಿಗೆ ಪೂರಕವಾದ,ಸ್ಫೂರ್ತಿದಾಯಕವಾದ ವರ್ಣ ಚಿತ್ರ ಸಹಿತ ವಿವರಣೆಗಳು ಇರುತ್ತವೆ.
  2. ಪ್ರೇರಣಾ ಕಾಗದಗಳು - ಅನುಭವದ ಆಧಾರದ ಮೇಲೆ ಕಲಿಕಾ ಅಂಶಗಳನ್ನು ಸಾಧಿಸುವಂತೆ ಮಾಡುವ, ಕಲಿಕೆಯಲ್ಲಿ ಸ್ಪೂರ್ತಿಯನ್ನು ತುಂಬುವ ರೀತಿಯಲ್ಲಿ ಯೋಜಿಸಲಾಗಿರುವ ಚಟುವಟಿಕೆ ಕಾಗದಗಳು ಇವು.
  3. ಅಧ್ಯಯನ ಸಾಮಗ್ರಿ - ಆಯಾ ತಿಂಗಳಲ್ಲಿ ಮಾಡಬೇಕಿರುವ ಅಧ್ಯಾಯಗಳಿಗೆ ನೇರವಾಗಿ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇದರಲ್ಲಿದ್ದು, ಇದರಿಂದ ಶಿಕ್ಷಕರ ವಿಷಯ ಜ್ಞಾನದ ಹೆಚ್ಚಳಕ್ಕೆ ಆಸ್ಪದ ಒದಗುತ್ತದೆ.
  4. 3-D ಮಾದರಿಗಳು ಇತಿಹಾಸ, ಭೂಗೋಲ ಶಾಸ್ತ್ರಕ್ಕೆ ಸಂಬಂಧಿಸಿದ ವಸ್ತುಗಳ ಮಾದರಿಗಳಾಗಿದ್ದು, ಮಕ್ಕಳು ಸ್ವತಃ ಸ್ಪರ್ಷಿಸಿ, ನೋಡಿ, ತಿಳಿಯಲು ಅನುವಾಗುವಂಥವು.
  5. ಮೇಸ್ಟ್ರ ಕಟ್ಟೆ - ಯೋಜನೆಯಲ್ಲಿ ಭಾಗಿಯಾಗಿರುವ ಶಿಕ್ಷಕರಿಗಾಗಿ ಇರುವ ಮಾಸಿಕ ಸಂಪನ್ಮೂಲ ಪತ್ರಿಕೆ
  6. ಮಾರುಕಟ್ಟೆಯಿಂದ ಖರೀದಿಸಿದ ಇತರ ಪತ್ರಿಕೆಗಳು, ಪುಸ್ತಕಗಳು

ಇವೆಲ್ಲವೂ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳಿಗೆ ಉಚಿತವಾಗಿ ಕೊಡಲಾಗುತ್ತಿದೆ.ಧ್ವನಿಯ ಈ ಎಲ್ಲ ಸಾಮಗ್ರಿಗಳನ್ನು ತರಗತಿಗಳಲ್ಲಿ ಉಪಯೋಗಿಸುವ ನಿರ್ದಿಷ್ಟ ವಿಧಾನಗಳ ಸಲಹೆ ನೀಡುವುದಾದರೂ, ಶಿಕ್ಷಕರು ತಮ್ಮ ಅನುಭವ, ಸನ್ನಿವೇಶ, ಸಾಮರ್ಥ್ಯಗಳಿಗೆ ಅನುಗುಣವಾಗಿ ತಾವೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲೂ ಅವಕಾಶವಿರುತ್ತದೆ.

ಪೂರಣ ಮಿತ್ರ

ಪೂರಣ ಯೋಜನೆಯ ಪ್ರಯೋಜನವು ಹೆಚ್ಚುಜನ ಶಿಕ್ಷಕರು ಮತ್ತು ಮಕ್ಕಳಿಗೆ ಲಭ್ಯವಾಗಲಿ ಎಂಬ ಉದ್ದೇಶದಿಂದ "ಪೂರಣ ಮಿತ್ರ"ಪ್ರಾರಂಭಾವಾಯಿತು. ಈ ಮಿತ್ರ್ರ ಯೋಜನೆಯಡಿ ಶಿಕ್ಷಕರು ವರ್ಷಕ್ಕೆ ರೂ.250/- ದೇಣಿಗೆ ನೀಡಿ ಸದಸ್ಯರಾಗಿ ಪ್ರತಿ ತಿಂಗಳು ಪೂರಣ ಯೋಜನೆಯ ಎಲ್ಲ ಮುದ್ರಿತ ಸಂಪನ್ಮೂಲಗಳ 3 ಪ್ರತಿಗಳನ್ನು ಪಡೆಯುತ್ತಾರೆ.

ಪೂರಣ ಯೋಜನೆಯ ವ್ಯಾಪ್ತಿ

ಕರ್ನಾಟಕದ 6 ಜಿಲ್ಲೆಗಳಲ್ಲಿ ಹರಡಿರುವ 25 ಶಾಲೆಗಳಲ್ಲಿ ಪೂರಣ ಯೋಜನೆಯು ಕಾರ್ಯಗತಗೊಳ್ಳುತ್ತಿದೆ. ಒಟ್ಟು 90 ಶಿಕ್ಷಕರು ಮತ್ತು 3300 ಮಕ್ಕಳು ಈ ಯೋಜನೆಯಲ್ಲಿ ಪಾಲ್ಗೊಂಡಿದ್ದಾರೆ. ಪೂರಣ ಮಿತ್ರ ಯೋಜನೆಯಡಿ ಸುಮಾರು 90 ಸದಸ್ಯ ಶಿಕ್ಷಕರಿದ್ದಾರೆ.

ಪೂರಣ ಯೋಜನೆಯ ಸಂಪನ್ಮೂಲಗಳು ಇಲ್ಲಿ ಕ್ಲಿಕ್ ಮಾಡಿ

 

 
 
 
ಯೋಜನೆಗಳು