Welcome to Dhwani Trust

ಹುಡುಕಿ

 

ಆರಂಭ

ಪೂರಣ ಯೋಜನೆಯಡಿ ಸಿದ್ಧವಾದ ಸಂಪನ್ಮೂಲಗಳನ್ನು ಉಪಯೋಗಿಸಿದ ಶಿಕ್ಷಕರು ಮತ್ತು ಶಾಲೆಗಳ ಮುಖ್ಯೋಪಾಧ್ಯಾಯರು ಕಿರಿಯ ಪ್ರಾಥಮಿಕ (ಅಂದರೆ 1-4 ತರಗತಿ) ಮಟ್ಟಕ್ಕೂ ಇಂತಹ ಯೋಜನೆಯೊಂದನ್ನು ಪ್ರಾರಂಭಿಸಬೇಕೆಂದು ಮನವಿ ಮಾಡಿಕೊಂಡರು. ಧ್ವನಿ ಬಳಗಕ್ಕೂ ಇಂಥದೊಂದು ಆಲೋಚನೆ ಮೊದಲಿನಿಂದಲೂ ಇದ್ದಿತು. ಇದೆಲ್ಲದರ ಫಲವಾಗಿ ಆರಂಭ ಯೋಜನೆಯು 2006-07ರಲ್ಲಿ ಪ್ರಾರಂಭವಾಯಿತು. ಈ ಯೋಜನೆಯಡಿ ಧ್ವನಿ ಕೇಂದ್ರವು ಕಿರಿಯ ಪ್ರಾಥಮಿಕ ತರಗತಿಗಳಿಗೆ ಕನ್ನಡ ಭಾಷೆ ಹಾಗೂ ಪರಿಸರ ವಿಜ್ಞಾನ ಮತ್ತು ಚಿತ್ರಕಲೆ ಈ ವಿಷಯಗಳಿಗೆ ಪೂರಕವಾಗುವ ಸಂಪನ್ಮೂಲಗಳನ್ನು ಹಾಗು ವಿಧಾನಗಳನ್ನೂ ವಿನ್ಯಾಸಗೊಳಿಸುತ್ತಿದೆ.

ಯೋಜನೆಯ ವಿನ್ಯಾಸ

ವಿವಿಧ ವಿಷಯಗಳ ನಡುವೆ ಇರುವ ಅಂತರ್-ಸಂಬಂಧಗಳನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಾಧ್ಯವಿರುವ ಹಾಗೆ ಆರಂಭ ಯೋಜನೆಯಡಿ ಸಂಪನ್ಮೂಲಗಳನ್ನು ಸೃಷ್ಟಿಸಲಾಗುತ್ತದೆ. ಒಂದೇ ಸಂಪನ್ಮೂಲ ಸಾಮಗ್ರಿಯು ಭಾಷೆ, ಪರಿಸರ ಜ್ಞಾನ ಹಾಗೂ ಕಲಾತ್ಮಕ ಅಂಶಗಳನ್ನು ಮಗುವಲ್ಲಿ ಉತ್ತೇಜಿಸಲು ಸಹಾಯವಾಗಬಹುದು. ಆರಂಭ ಸಂಪನ್ಮೂಲಗಳು ಮಗುವಿಗೆ ಈ ರೀತಿ ಸಹಾಯಕವಾಗಿರುತ್ತವೆ:

  • ನೋಡಲು ಅಂದವಾಗಿರುವ ಬಣ್ಣದ ಸಂಪನ್ಮೂಲಗಳಿಂದ ಮಗು ತನ್ನ ಅಕ್ಕ ಪಕ್ಕದಲ್ಲಿರುವ ಪರಿಸರದ ಬಗ್ಗೆ ತಿಳಿದುಕೊಳ್ಳುವುದು - ಸಸ್ಯಗಳು, ಪ್ರಾಣಿಗಳು, ಪಕ್ಷಿಗಳು ಇತ್ಯಾದಿ
  • ವಿವಿಧ ವಿನ್ಯಾಸಗಳನ್ನು ಗುರುತಿಸುವ, ಹುಡುಕುವ, ಕೂಡಿಸುವ ಇತ್ಯಾದಿ ಮೂಲಭೂತ ಸಾಮರ್ಥ್ಯಗಳನ್ನು ಬೆಳೆಸುವುದು
  • ಚಿತ್ರ ಬಿಡಿಸಿ ಬಣ್ಣ ಹಚ್ಚುವುದರಿಂದ ಮಕ್ಕಳು ಉತ್ಸಾಹಭರಿತರಾಗಿರುತ್ತಾರೆ
  • ಆಲಿಸುವದರ ಮೂಲಕ ಭಾಷಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು
  • ಕೇಳಿದ ಚಿಕ್ಕ ಕಥೆಗಳನ್ನು ತಮ್ಮದೇ ಭಾಷೆ ಮತ್ತು ಕಲ್ಪನೆಗಳಲ್ಲಿ ಹೇಳುವುದು
  • ಅಕ್ಷರ ಮಾಲೆಯನ್ನು ಹಲವಾರು ಆಟಗಳ ಮುಖಾಂತರ ಕಲಿಯುವುದು

ಸಾಮಗ್ರಿ ಸ್ವರೂಪ

ಪ್ರತಿ ತಿಂಗಳ ಆರಂಭ ಸಾಮಗ್ರಿಯು ಹೀಗಿರುತ್ತದೆ:

  • ಪಠ್ಯಪುಸ್ತಕದಲ್ಲಿ ಸೂಚಿಸಿರುವ ಹಾಗೂ ಧ್ವನಿಯು ವಿನ್ಯಾಸಗೊಳಿಸಿರುವ ಚಟುವಟಿಕೆಗಳನ್ನು ನಡೆಸಲು ಸಹಾಯಕವಾಗುವಂತಿರುತ್ತವೆ.
  • ಮಕ್ಕಳು ಪಾಠದಲ್ಲಿರುವ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ತಮ್ಮ ಮನಸ್ಸು ಮತ್ತು ಬುದ್ಧಿ ವಿಕಾಸ ಮಾಡಿಕೊಳ್ಳಲು ಅನುವಾಗುವ ರೀತಿಯಲ್ಲಿರುತ್ತವೆ.
  • ಶಿಕ್ಷಕರು ತಮ್ಮ ವಿಷಯ ಜ್ಞಾನದ ಆಳವನ್ನು ಹೆಚ್ಚಿಸಿಕೊಳ್ಳಲು ಸಹಾಯ ಒದಗಿಸುತ್ತವೆ.
  • ಸಂಚಿಕೆಗಳು
  • 3-D ಮಾದರಿಗಳು- ಮಕ್ಕಳು ವಸ್ತುಗಳನ್ನು ಸ್ವತಃ ಮುಟ್ಟಿ ನೋಡಿ, ಮೂಸಿ ನೋಡಿ, ಒಟ್ಟಾರೆ ಆದಷ್ಟು ಸ್ವಾನುಭವ ಪಡೆಯುವ ಮೂಲಕ ಪಾಠದಲ್ಲಿನ ಕಲಿಕಾಂಶಗಳನ್ನು/ ಸಾಮರ್ಥ್ಯಗಳನ್ನು ಗಳಿಸಿಕೊಳ್ಳುವಂತೆ ಮಾಡಲು ಈ ಬಗೆಯ ಸಾಮಗ್ರಿ ಸಹಾಯಕವಾಗುವುವು.
  • ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿಗಳ ಕ್ಯಾಸೆಟ್ ಮತ್ತು ಫೋಟೋ ಸಂಗ್ರಹಗಳು, ಪ್ರಾಸ/ ಶಿಸು ಪದ್ಯಗಳ ಸಂಗ್ರಹ, ಚಟುವಟಿಕೆ ಹಾಗೂ ಆಟಗಳು ಅವುಗಳನ್ನು ನಡೆಸಲು ಬೇಕಾದ ಸಹಾಯಕ/ಪೂರಕ ಸಾಮಗ್ರಿಗಳು ಅಥವಾ ಸೂಚನೆಗಳು/ನಿರ್ದೇಶನಗಳು ಇರುತ್ತವೆ.

ಇವೆಲ್ಲವನ್ನೂ ಯೋಜನೆಯಲ್ಲಿ ಭಾಗಿಯಾಗಿರುವ ಎಲ್ಲಾ ಶಾಲೆಗಳ ಶಿಕ್ಷಕರು ಮತ್ತು ಮಕ್ಕಳಿಗೆ ಉಚಿತವಾಗಿ ಕೊಡಲಾಗುತ್ತಿದೆ. ಧ್ವನಿಯ ಈ ಎಲ್ಲ ಸಾಮಗ್ರಿಗಳನ್ನು ತರಗತಿಗಳಲ್ಲಿ ಉಪಯೋಗಿಸುವ ನಿರ್ದಿಷ್ಟ ವಿಧಾನವನ್ನೂ ಸೂಚಿಸುತ್ತದೆಯಾದರೂ, ಶಿಕ್ಷಕರು ತಮ್ಮ ಅನುಭವ, ಅನುಕೂಲ, ಸಾಮರ್ಥ್ಯಗಳಿಗೆ ಅನುಗುಣವಾಗಿ ತಾವೇ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲೂ ಅವಕಾಶವಿರುತ್ತದೆ.

ಆರಂಭ ಮಿತ್ರ

ಆರಂಭ ಯೋಜನೆಯೇತರ ಆಸಕ್ತ ಶಿಕ್ಷಕರು ರೂ.250/- ವಾರ್ಷಿಕ ದೇಣಿಗೆ ನೀಡಿ ಆರಂಭ ಮಿತ್ರದ ಸದಸ್ಯರಾಗಬಹುದು. ಪ್ರತಿ ತಿಂಗಳು ಈ ಶಿಕ್ಷಕರು ಆರಂಭ ಯೋಜನೆಯಡಿ ಸೃಷ್ಟಿಸಿದ ಎಲ್ಲ ಮುದ್ರಿತ ಸಂಪನ್ಮೂಲಗಳ 2-5 ಪ್ರತಿಗಳನ್ನು ಪಡೆಯುತ್ತಾರೆ. ಈ ಶಿಕ್ಷಕರಿಗೆ ವಾರ್ಷಿಕ ತರಬೇತಿಯು ಕಡ್ಡಾಯವಾಗಿಲ್ಲ.

ಆರಂಭ ಯೋಜನೆಯ ವ್ಯಾಪ್ತಿ

ಆರಂಭ ಯೋಜನೆಯನ್ನು ೬ ಜಿಲ್ಲೆಗಳಲ್ಲಿ ಹರಡಿರುವ ೨೫ ಶಾಲೆಗಳಲ್ಲಿ ಕಾರ್ಯಗತಗೊಳ್ಳುತ್ತಿದೆ. ಇದರಡಿ ಸುಮಾರು ೮೫ ಶಿಕ್ಷಕರು ಹಾಗೂ ೩೪೦೦ ಮಕ್ಕಳು ಭಾಗವಹಿಸುತ್ತಿದ್ದಾರೆ. ಆರಂಭ ಮಿತ್ರ ಯೋಜನೆಯಡಿ ಸುಮಾರು ೨೨೦ ಸದಸ್ಯರಿದ್ದಾರೆ. ಈ ೨೨೦ ಸದಸ್ಯರಲ್ಲಿ ಸುಮಾರು ೮೦ ಶಿಕ್ಷಕರು (ಅಥವಾ ಬೋಧಕರು) ಮೊಬಿಲಿಟಿ ಇಂಡಿಯಾ ಸಂಸ್ಥೆಯು ಚಾಮರಾಜನಗರ ಜಿಲ್ಲೆಯಲ್ಲಿ ಕಾರ್ಯಗತಕೊಳಿಸುತ್ತಿರುವ ಶೈಕ್ಷಣಿಕ ಯೋಜನೆಯೊಂದರಲ್ಲಿ ಭಾಗವಹಿಸುತ್ತಿದ್ದಾರೆ.

 

 

 

 
 
 
ಯೋಜನೆಗಳು